ಕ.ರಾ.ರ.ಸಾ.ನಿ.ದ ಇತಿಹಾಸ

ಅಂದಿನ ಮೈಸೂರು ರಾಜ್ಯ ಸರ್ಕಾರವು ರಾಜ್ಯದ ಸಾರ್ವಜನಿಕರಿಗೆ ಸಮರ್ಪಕ ಸಾರಿಗೆ ಸೌಲಭ್ಯಗಳನ್ನು ಒದಗಿಸಲು, ಮೈಸೂರು ಸರ್ಕಾರ ರಸ್ತೆ ಸಾರಿಗೆ ಇಲಾಖೆ (ಎಂ.ಜಿ.ಆರ್.ಟಿ.ಡಿ.) ಅನ್ನು ದಿನಾಂಕ 12-09-1948ರಂದು 120 ವಾಹನಗಳೊಂದಿಗೆ ಪ್ರಾರಂಭಿಸಲಾಯಿತು.

ರಾಜ್ಯ ರಸ್ತೆ ಸಾರಿಗೆಯು ಅಂದಿನ ಮೈಸೂರು ಸರ್ಕಾರದ ಒಂದು ಇಲಾಖೆಯಾಗಿ ಕಾರ್ಯ ನಿರ್ವಹಿಸುತ್ತಿದ್ದುದ್ದು, ತದನಂತರ ಒಂದು ಸ್ವತಂತ್ರ ಸಂಸ್ಥೆಯನ್ನಾಗಿ ರಸ್ತೆ ಸಾರಿಗೆ ನಿಗಮದ ಕಾಯಿದೆ 1950ರ ಸೆಕ್ಷನ್ 3ರಂತೆ ದಿನಾಂಕ 01-08-1961 ರಂದು ಪರಿವರ್ತಿಸಲಾಯಿತು. ಬಿ.ಟಿ.ಎಸ್. ಅಂಗಸಂಸ್ಥೆಯ ಆಸ್ತಿ ಮತ್ತು ಋಣಭಾರಗಳನ್ನು ಹೊರತುಪಡಿಸಿ ದಿನಾಂಕ 01-08- 1961ರಲ್ಲಿದ್ದ ಎಂ.ಜಿ.ಆರ್.ಟಿ.ಡಿ.ಯ ಆಸ್ತಿ ಮತ್ತು ಋಣಭಾರಗಳನ್ನು ಹೊಸ ಸಂಸ್ಥೆಗೆ ವರ್ಗಾಯಿಸಲಾಯಿತು ಹಾಗೂ ಸಂಸ್ಥೆಯನ್ನು ಎಂ.ಎಸ್.ಆರ್.ಟಿ.ಸಿ. ಎಂದು ನಾಮಕರಣ ಮಾಡಲಾಯಿತು. ಬಿ.ಟಿ.ಎಸ್. ಅಂಗಸಂಸ್ಥೆಯ ಆಸ್ತಿ ಮತ್ತು ಋಣಭಾರಗಳನ್ನು 01-10-1961 ರಂದು ಎಂ.ಎಸ್.ಆರ್.ಟಿ.ಸಿ.ಗೆ ವರ್ಗಾಯಿಸಲಾಯಿತು. ಅದರಿಂದಾಗಿ ಇಡೀ ರಾಜ್ಯಕ್ಕೆ ಒಂದು ಸಂಸ್ಥೆಯನ್ನು ಸ್ಥಾಪಿಸಿದಂತಾಗಿದೆ.

ಪ್ರಾರಂಭದಲ್ಲಿ, ಪ್ರಯಾಣಿಕರ ಸಾರಿಗೆ ಸೇವೆಗಳನ್ನು 6 ವಿಭಾಗಗಳು – 5 ವಿಭಾಗಗಳು ಗ್ರಾಮಾಂತರ ಸೇವೆಗಳನ್ನು ಮತ್ತು 1 ವಿಭಾಗವು ಬೆಂಗಳೂರಿನ ನಗರ ಸಾರಿಗೆ ಸೇವೆಗಳನ್ನು-ಕಾರ್ಯಾಚರಿಸುತ್ತಿದ್ದವು. ಇದು 37 ಘಟಕಗಳು, 2 ಪ್ರಾದೇಶಿಕ ಕಾರ್ಯಾಗಾರಗಳು ಮತ್ತು ಬೆಂಗಳೂರಿನಲ್ಲಿ ಒಂದು ಕೇಂದ್ರ ಕಚೇರಿಯನ್ನು ಹೊಂದಿತ್ತು. 15 ಖಾಯಂ ಮತ್ತು 30 ತಾತ್ಕಾಲಿಕ ಬಸ್ ನಿಲ್ದಾಣಗಳು, 35 ರಸ್ತೆಯಂಚಿನ ಆಶ್ರಯದಾಣಗಳು ಮತ್ತು 104 ನಿಲುಗಡೆದಾಣಗಳಿದ್ದವು. ಒಟ್ಟಾರೆ 9705 ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರತಿ ಅನುಸೂಚಿಗೆ ಸಿಬ್ಬಂದಿ ಅನುಪಾತ 9.43 ಆಗಿತ್ತು. 1029 ಅನುಸೂಚಿಗಳ ಕಾರ್ಯಾಚರಣೆಗೆ 1065 ಮಾರ್ಗಗಳಲ್ಲಿ 32134 ಮೈಲಿಗಳ ಮಾರ್ಗದೂರವನ್ನು ಹೊಂದಿ, ಸರಾಸರಿ ಪ್ರತಿದಿನ 127571 ಅನುಸೂಚಿ ಮೈಲುಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿತ್ತು. ಪರಸ್ಪರ ಒಪ್ಪಂದದ ಆಧಾರದ ಮೇಲೆ ನೆರೆರಾಜ್ಯಗಳಿಗೆ 40 ಅಂತರರಾಜ್ಯ ಮಾರ್ಗಗಳಲ್ಲಿ ಕಾರ್ಯಾಚರಣೆ ಮಾಡಲಾಗುತ್ತಿತ್ತು. (ಮಹಾರಾಷ್ಟ್ರ 29, ಗೋವಾ 1, ಆಂಧ್ರ ಪ್ರದೇಶ 7, ತಮಿಳುನಾಡು 2 ಮತ್ತು ಕೇರಳ 1). 1518 ವಾಹನಗಳನ್ನು ಹೊಂದಿದ್ದು ಸರಾಸರಿ ವಾಹನ ಬಳಕೆ 123.8 ಮೈಲಿಗಳಾಗಿತ್ತು. ಪ್ರತಿದಿನ ಸರಾಸರಿ 4.35 ಲಕ್ಷ ಪ್ರಯಾಣಿಕರನ್ನು ಕೊಂಡೊಯ್ಯಲಾಗುತ್ತಿತ್ತು. ಅವಘಡ ಪ್ರಮಾಣ ಮತ್ತು ಅಪಘಾತ ಪ್ರಮಾಣ ಅನುಕ್ರಮವಾಗಿ 1.88 ಮತ್ತು 1.19 ಆಗಿತ್ತು. ಪ್ರತಿ ಮೈಲಿಗೆ 161.6 ಪೈಸೆ ಆದಾಯವನ್ನು ಗಳಿಸಿ, ಪ್ರತಿ ಮೈಲಿಗೆ 127.2 ಪೈಸೆ ವೆಚ್ಚವನ್ನು ಭರಿಸಿ ಪ್ರತಿ ಮೈಲಿಗೆ 34.4 ಪೈಸೆ ಲಾಭ ಗಳಿಸಲಾಗಿತ್ತು.

ಕ.ರಾ.ರ.ಸಾ.ಸಂಸ್ಥೆಯ ಬೆಳವಣಿಗೆ ಮತ್ತು ಪ್ರಗತಿ :

ವಿವಿಧ ಕ್ಷೇತ್ರಗಳಲ್ಲಿ ಕರ್ನಾಟಕವು ಸಾಧಿಸಿದ ತ್ವರಿತ ಅಭಿವೃದ್ಧಿಯ ಹಿನ್ನೆಲೆಯಲ್ಲಿ, ಕ.ರಾ.ರ.ಸಾ. ಸಂಸ್ಥೆಯು ಕನ್ನಡಿಗರ ಮತ್ತು ನೆರೆಯ ರಾಜ್ಯದವರ ಸಾರಿಗೆ ಬೇಡಿಕೆಗಳನ್ನು ಈಡೇರಿಸಲು ಅತ್ಯುತ್ತಮ ಸಂಸ್ಥೆಯಾಗಿ ರೂಪುಗೊಂಡಿತು. 31-03-1997ರ ಅಂತ್ಯಕ್ಕೆ, ಸಂಸ್ಥೆಯು 19 ವಿಭಾಗಗಳಲ್ಲಿ ಕಾರ್ಯಾಚರಿಸುತ್ತಿದೆ. ಅವುಗಳಲ್ಲಿ 17 ವಿಭಾಗಗಳು ಗ್ರಾಮಾಂತರ ಸಾರಿಗೆ ವಿಭಾಗಗಳಾಗಿದ್ದು ಎರಡು ವಿಭಾಗಗಳು ಬೆಂಗಳೂರಿನಲ್ಲಿ ನಗರ ಸಾರಿಗೆ ಕಾರ್ಯಾಚರಣೆ ವಿಭಾಗಗಳಾಗಿತ್ತು. 108 ಘಟಕಗಳು, 2 ಪ್ರಾದೇಶಿಕ ಕಾರ್ಯಾಗಾರಗಳು ಮತ್ತು ಬೆಂಗಳೂರಿನಲ್ಲಿ ಒಂದು ಕೇಂದ್ರ ಕಚೇರಿಯನ್ನು ಹೊಂದಿತ್ತು. 281 ಖಾಯಂ ಮತ್ತು 11 ತಾತ್ಕಾಲಿಕ ಬಸ್ ನಿಲ್ದಾಣಗಳು, 337 ರಸ್ತೆಯಂಚಿನ ಆಶ್ರಯದಾಣಗಳು ಮತ್ತು 1009 ನಿಲುಗಡೆದಾಣಗಳನ್ನು ಹೊಂದಿತ್ತು. 59033 ಸಿಬ್ಬಂದಿಯನ್ನು ಹೊಂದಿದ್ದು, ಪ್ರತಿ ಅನುಸೂಚಿಗೆ ಸಿಬ್ಬಂದಿ ಪ್ರಮಾಣ 6.22ರಷ್ಟಿತ್ತು. 9493 ಅನುಸೂಚಿಗಳನ್ನು 13273 ಮಾರ್ಗಗಳಲ್ಲಿ 9.49 ಲಕ್ಷ ಕಿ.ಮೀ.ಗಳ ಮಾರ್ಗದೂರ ಹೊಂದಿ ಕಾರ್ಯಾಚರಿಸಲಾಗುತ್ತಿತ್ತು. ಹಾಗೂ ಸರಾಸರಿ ದೈನಂದಿನ ಅನುಸೂಚಿ ಕಿ.ಮೀ.ಗಳು 31.61 ಲಕ್ಷವಾಗಿತ್ತು. 602 ಅಂತರರಾಜ್ಯ ಮಾರ್ಗಗಳಲ್ಲಿ ಸಂಸ್ಥೆಯು ಪರಸ್ಪರ ಒಪ್ಪಂದದ ಮೇಲೆ ನೆರೆಯ ರಾಜ್ಯಗಳಿಗೆ ಕಾರ್ಯಾಚರಿಸಲಾಗುತ್ತಿತ್ತು. (ಮಹಾರಾಷ್ಟ್ರ 282, ಗೋವಾ 37, ಆಂಧ್ರ ಪ್ರದೇಶ 223, ತಮಿಳುನಾಡು 33 ಮತ್ತು ಕೇರಳ 27). ಒಟ್ಟು 10476 ವಾಹನಗಳನ್ನು ಹೊಂದಿದ್ದು, ಸರಾಸರಿ ವಾಹನ ಉಪಯುಕ್ತತೆ 299.6 ಕಿ.ಮೀ.ಗಳಾಗಿತ್ತು. ಪ್ರತಿ ದಿನ ಸರಾಸರಿ 57.82 ಲಕ್ಷ ಪ್ರಯಾಣಿಕರನ್ನು ಕೊಂಡೊಯ್ಯಲಾಗುತ್ತಿತ್ತು. ಅವಘಡ ಮತ್ತು ಅಪಘಾತ ಪ್ರಮಾಣ ಅನುಕ್ರಮವಾಗಿ 0.23 ಮತ್ತು 0.22 ಆಗಿತ್ತು. ಪ್ರತಿ ಕಿ.ಮೀ.ಗೆ 807.3 ಪೈಸೆ ಆದಾಯಗಳಿಸಿ, ಪ್ರತಿ ಕಿ.ಮೀ.ಗೆ 975.4 ಪೈಸೆ ಕಾರ್ಯಾಚರಣೆ ವೆಚ್ಚವನ್ನು ಭರಿಸಿ, ಪ್ರತಿ ಕಿ.ಮೀ. ಸಾರಿಗೆ ಆದಾಯಕ್ಕೆ 168.1 ಪೈಸೆ ನಷ್ಟವನ್ನು ಅನುಭವಿಸಿದೆ.

ಕ.ರಾ.ರ.ಸಾ.ಸಂಸ್ಥೆಯ ವಿಭಜನೆ:

ಕಾರ್ಯಾಚರಣೆ ದಕ್ಷತೆಯನ್ನು ಸುಧಾರಿಸಲು, ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸಲು ಮತ್ತು ಕಾರ್ಯಾಚರಣೆಯ ಮೇಲೆ ಪರಿಣಾಮಕಾರಿ ಮೇಲ್ವಿಚಾರಣೆಯನ್ನು ಹೊಂದಲು, ಕರ್ನಾಟಕ ಸರ್ಕಾರವು ಸಂಸ್ಥೆಯನ್ನು ನಾಲ್ಕು ಪ್ರತ್ಯೇಕ ಸಂಸ್ಥೆಗಳನ್ನಾಗಿ ವಿಭಜಿಸಲು ತನ್ನ ಆದೇಶ ಸಂಖ್ಯೆ ಹೆಚ್‍ಟಿಡಿ 127/ಟಿಆರ್‍ಎ/96 ದಿನಾಂಕ 22-02-1997 ಅನ್ನು ಹೊರಡಿಸಿತು.
1996-97ರವರೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಅವಿಭಜಿತ/ಏಕೀಕೃತ ಸಂಸ್ಥೆಯಾಗಿ ಆಗಿತ್ತು. 1997-98ನೇ ಸಾಲಿನಲ್ಲಿ, ರಾಜ್ಯ ಸರ್ಕಾರವು ಕ.ರಾ.ರ.ಸಾ.ಸಂಸ್ಥೆಯಿಂದ ಎರಡು ಹೊಸ ಸಂಸ್ಥೆಗಳನ್ನು ಬೇರ್ಪಡಿಸಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಇವುಗಳನ್ನು ಹೊಸದಾಗಿ ಪ್ರಾರಂಭಿಸಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯು ಬೆಂಗಳೂರಿನಲ್ಲಿ ಮತ್ತು ವಾ.ಕ.ರ.ಸಾ.ಸಂಸ್ಥೆ ಕೇಂದ್ರ ಕಚೇರಿಯು ಹುಬ್ಬಳ್ಳಿಯಲ್ಲಿರುತ್ತದೆ. ಬೆಂ.ಮ.ನ.ಸಾ.ಸಂಸ್ಥೆ ದಿನಾಂಕ 15-08-1997ರಂದು ಅಸ್ಥಿತ್ವಕ್ಕೆ ಬಂದಿದ್ದು ಬೆಂಗಳೂರು ನಗರದ ನಗರ ಸಾರಿಗೆ ಬೇಡಿಕೆಯನ್ನು ಪೂರೈಸಲಾಗುತ್ತಿದೆ. ದಿನಾಂಕ 01-11-1997ರಂದು ವಾ.ಕ.ರ.ಸಾ.ಸಂಸ್ಥೆ ಅಸ್ಥಿತ್ವಕ್ಕೆ ಬಂದಿದ್ದು, ರಾಜ್ಯದ ವಾಯವ್ಯ ಭಾಗದ ಜಿಲ್ಲೆಗಳ ಸಾರಿಗೆ ಬೇಡಿಕೆಗಳಿಗನುಗುಣವಾಗಿ ಸೇವೆಯನ್ನು ಒದಗಿಸುತ್ತಿದೆ. ವಾ.ಕ.ರ.ಸಾ.ಸಂಸ್ಥೆ ದಿನಾಂಕ 01-04-1998ರಿಂದ ರಸ್ತೆ ಸಾರಿಗೆ ಕಾಯಿದೆ ಅಧಿನಿಯಮ 1982ರಂತೆ ಆರ್ಥಿಕವಾಗಿ ಸ್ವತಂತ್ರವಾಗಿದೆ. ಈ.ಕ.ರ.ಸಾ.ಸಂಸ್ಥೆ ಎಂಬ ಮತ್ತೊಂದು ಸಂಸ್ಥೆಯನ್ನು ದಿನಾಂಕ 15-08-2000ರಂದು ಸ್ಥಾಪಿಸಲಾಯಿತು. ಅದರ ಕೇಂದ್ರ ಕಚೇರಿಯು ಗುಲ್ಬರ್ಗದಲ್ಲಿದ್ದು, ರಾಜ್ಯದ ಈಶಾನ್ಯ ಜಿಲ್ಲೆಗಳ ಸಾರಿಗೆ ಬೇಡಿಕೆಗಳಿಗನುಗುಣವಾಗಿ ಸೇವೆಯನ್ನು ಒದಗಿಸುತ್ತಿದೆ. ಈ.ಕ.ರ.ಸಾ.ಸಂಸ್ಥೆಯು ದಿನಾಂಕ 01-10-2000ರಿಂದ ಆರ್ಥಿಕವಾಗಿ ಸ್ವತಂತ್ರವಾಗಿದೆ.

ಮರುರೂಪಿತ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಕಾರ್ಯಾಚರಣೆ

ಪ್ರಸ್ತುತ ಸ್ಥಿತಿ (ಸೆಪ್ಟೆಂಬರ್‌ 2020ರಂತೆ):

ಕ.ರಾ.ರ.ಸಾ.ನಿಗಮವು ತನ್ನ ಕೇಂದ್ರ ಕಚೇರಿಯನ್ನು ಬೆಂಗಳೂರಿನಲ್ಲಿ ಹೊಂದಿದೆ. ಇದು ತನ್ನ ಕಾರ್ಯಾಚರಣೆ ವ್ಯಾಪ್ತಿಯಲ್ಲಿ ರಾಜ್ಯದ 17 ಜಿಲ್ಲೆಗಳನ್ನು ಒಳಗೊಂಡಿದೆ (ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಮಂಗಳೂರು, ಉಡುಪಿ, ಹಾಸನ, ಚಿಕ್ಕಮಗಳೂರು, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ). ನಿಗಮವು ಘಟಕ ಮಟ್ಟ, ವಿಭಾಗ ಮಟ್ಟ ಮತ್ತು ಕೇಂದ್ರ ಕಚೇರಿ ಮಟ್ಟ ಎಂದು ಒಟ್ಟಾರೆ 3 ಹಂತದ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಪ್ರಸ್ತುತ ಒಟ್ಟು 17 ವಿಭಾಗಗಳನ್ನು– 16 ಕಾರ್ಯಾಚರಣೆ ವಿಭಾಗಗಳು (ಬೆಂಗಳೂರು ಕೇಂದ್ರ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು ನಗರ ಸಾರಿಗೆ, ಮೈಸೂರು ಗ್ರಾಮಾಂತರ, ಮಂಡ್ಯ, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಮಂಗಳೂರು, ಪುತ್ತೂರು, ದಾವಣಗೆರೆ, ಶಿವಮೊಗ್ಗ ಮತ್ತು ಚಿತ್ರದುರ್ಗ) ಮತ್ತು ಒಂದು ಬಸ್ ನಿಲ್ದಾಣ ವಿಭಾಗ ಅಂದರೆ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ವಿಭಾಗವನ್ನು ಹೊಂದಿರುತ್ತದೆ. 83 ಘಟಕಗಳು, 2 ಪ್ರಾದೇಶಿಕ ಕಾರ್ಯಾಗಾರಗಳು, 1 ಕೇಂದ್ರೀಯ ತರಬೇತಿ ಕೇಂದ್ರ, 4 ಪ್ರಾದೇಶಿಕ ತರಬೇತಿ ಕೇಂದ್ರ, 1 ಮುದ್ರಣಾಲಯ, ಹಾಗು 1 ಆಸ್ಪತ್ರೆಯನ್ನು ಸಹ ಹೊಂದಿರುತ್ತದೆ. ಪ್ರಸ್ತುತ ಸುಮಾರು 37725 ಕಾರ್ಮಿಕರನ್ನು ಹೊಂದಿರುತ್ತದೆ. 8663 ವಾಹನಗಳೊಂದಿಗೆ ದೈನಂದಿನ 17.23 ಲಕ್ಷ ಕಿ.ಮೀಗಳನ್ನು ಕಾರ್ಯಾಚರಣೆ ಮಾಡಿ, ಪ್ರತಿ ದಿನ ರೂ. 419.43 ಲಕ್ಷ ಸಾರಿಗೆ ಆದಾಯವನ್ನು ಗಳಿಸಿ, ಸರಾಸರಿ 9.63 ಲಕ್ಷ ಪ್ರಯಾಣಿಕರನ್ನು ಕೊಂಡೊಯ್ಯುತ್ತಿದೆ. ದೇಶದ ಇತರ ಸಾರಿಗೆ ನಿಗಮಗಳಿಗೆ ಹೋಲಿಸಿದರೆ ನಿಗಮವು ಗಾತ್ರದಲ್ಲಿ ಐದನೇ ಸ್ಥಾನದಲ್ಲಿದೆ.

Last updated date 14 13-05-2019 19:15 PM
Custom Search
Sort by:
Relevance
Relevance
Date